ಕಾಸ್ಟಸ್

ಆಕರ್ಷಕವಾದ ಎಲೆಗಳು ಮತ್ತು ಸುಂದರವಾದ ಹೂಗಳಿಂದಾಗಿ ಉದ್ಯಾನ ಪ್ರಾಮುಖ್ಯ ಪಡೆದಿರುವ ಒಂದು ಸಸ್ಯ ಜಾತಿ. ಜಿಂಜಿಬರೇಸೀ ಕುಟುಂಬಕ್ಕೆ ಸೇರಿದೆ. ಉಷ್ಣದೇಶಗಳಲ್ಲೆಲ್ಲ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದರಲ್ಲಿ ಸುಮಾರು 140 ಪ್ರಭೇದಗಳಿವೆ. ಈ ಪೈಕಿ ಕೆಲವನ್ನು ಅಲಂಕಾರ ಸಸ್ಯಗಳಾಗಿ ಉದ್ಯಾನಗಳಲ್ಲಿ ಬೆಳೆಸುವುದುಂಟು. ಹೀಗೆ ಬೆಳೆಸುವ ಪ್ರಭೇದಗಳಲ್ಲಿ ಕಾಸ್ಟಸ್ ಸ್ಪೀಶಿಯೋಸಸ್, ಕಾ. ಇಲಿಗನ್ಸ್, ಕಾ. ಪಿಕ್ಟಸ್, ಕಾ.ಇಗ್ನಿಯಸ್ ಮತ್ತು ಕಾ.ಅರ್ಗೈರೋಫಿಲಸ್ ಎಂಬುವು ಮುಖ್ಯವಾದುವು. ಕಾಸ್ಟಸ್ 4'-10' ಎತ್ತರಕ್ಕೆ ಬೆಳೆಯುವ ಮೂಲಿಕೆ ಸಸ್ಯ. ಗೆಡ್ಡೆಯಂತಿರುವ ಬೇರು, ಉದ್ದನೆಯ ನೀಳವಾದ ಹಾಗೂ ರಸಭರಿತವಾದ ಕಾಂಡ, ಉದ್ದುದ್ದನೆಯ ಎಲೆಗಳು, ಕಾಂಡದ ಸುತ್ತ ಹೊದಿಕೆಯಂತೆ ಸುತ್ತಿರುವ ಎಲೆಯ ಬುಡ, ಕಾಂಡದ ತುದಿಯಲ್ಲಿ ಹುಟ್ಟುವ ಕದಿರು ಹೂಗೊಂಚಲು (ಸ್ಟೈಕ್), ಜೋಲು ಬಿದ್ದಿರುವ ಉಪಪತ್ರಗಳು (ಬ್ರಾಕ್ಟ್ಸ್), ಹಳದಿ, ಕೆಂಪು, ಬಿಳಿ, ಕೇಸರಿ ಮುಂತಾದ ವರ್ಣವೈವಿಧ್ಯವನ್ನು ತೋರುವ ಹೂಗಳು ಈ ಸಸ್ಯದ ಮುಖ್ಯ ಲಕ್ಷಣಗಳು. ಹೂಗಳ ಸೌಂದರ್ಯ ಅವುಗಳಲ್ಲಿನ ಗಂಟೆಯಾಕಾರದ ದೊಡ್ಡ ಬರಡು ಕೇಸರದಿಂದ ಹೆಚ್ಚುತ್ತದೆ. ಅಂಡಾಶಯ ನೀಚ ಸ್ಥಾನದ್ದು. ಅದರಲ್ಲಿ ಮೂರು ಕೋಣೆಗಳಿವೆ. ಫಲ ಸಂಪುಟ ಮಾದರಿಯದು. ಬೀಜಗಳು ಅಸಂಖ್ಯಾತ.

ಕಾಸ್ಟಸ್ ಸಸ್ಯವನ್ನು ಕಾಂಡದ ತುಂಡುಗಳಿಂದ ವೃದ್ಧಿಸಬಹುದು. ಮರಳು ಮಿಶ್ರಿತ ಗೋಡುಮಣ್ಣಿನಲ್ಲಿದು ಚೆನ್ನಾಗಿ ಬೆಳೆಯುತ್ತದೆ. ಕೊಂಚ ನೆರಳಿದ್ದರೆ ಬೆಳೆವಣಿಗೆಗೆ ಚೆನ್ನು.

(ಬಿ.ಎ.ಸಿ.)

 